ಮಸೂರಿ -
	ಭಾರತದ ಉತ್ತರ ಪ್ರದೇಶ ರಾಜ್ಯದ ಡೆಹ್ರಾಡೂನ್ ಜಿಲ್ಲೆಯ ಒಂದು ಸುಂದರ ಗಿರಿಧಾಮ. ಸಮುದ್ರಮಟ್ಟದಿಂದ ಸುಮಾರು 2,000 ಮೀಟರ್ ಎತ್ತರದಲ್ಲಿರುವ ಮಸೂರಿ ಉತ್ತರ ಅಕ್ಷಾಂಶ 30ಲಿ27 ಪೂರ್ವರೇಖಾಂಶ 78ಲಿ05 ನಲ್ಲಿದೆ. ಡೆಹ್ರಾಡೂನ್ ಪಟ್ಟಣದ ಉತ್ತರದಲ್ಲಿ 35 ಕಿ.ಮೀ. ದೂರದಲ್ಲಿರುವ ಮಸೂರಿಯ ಉತ್ತರದಲ್ಲಿ ಗಗನಚುಂಬಿ ಹಿಮಾಲಯ ಪರ್ವತಶ್ರೇಣಿ. ದಕ್ಷಿಣದಲ್ಲಿ ಮನೋಹರವಾದ ಡೂನ್ ಕಣಿವೆಗಳಿವೆ. ಇಲ್ಲಿ ಬೆಳೆಯುವ ಮನ್‍ಸೂರಿ ಮರಗಳಿಂದಾಗಿ ಮಸೂರಿ ಎಂಬ ಹೆಸರು ಬಂದಿತೆನ್ನುವರು. ಇಲ್ಲಿಯ ವಾರ್ಷಿಕ ಮಳೆ ಸರಾಸರಿ 253.7 ಸೆಂ.ಮೀ. ಜನಸಂಖ್ಯೆ 18.233 (1981). 

	ಬ್ರಿಟಿಷ್ ಸೇನಾಧಿಕಾರಿಯೊಬ್ಬ 1811ರಲ್ಲಿ ತನ್ನ ತಂಡದೊಡನೆ ಬೇಟೆಯಾಡಲು ಬಂದು ಈ ಸುಂದರ ತಾಣವನ್ನು ಕೊಂಡುಕೊಂಡಿದ್ದು ಮರುವರ್ಷವೇ ಬ್ರಿಟಿಷ್ ಈಸ್ಟಿಇಂಡಿಯಾ ಕಂಪೆನಿಗೆ ಮಾರಿದ. ಹರಿದ್ವಾರ-ಡೆಹ್ರಾಡೂನ್ ರೈಲುಮಾರ್ಗವಾದ ಮೇಲೆ ಈ ಸ್ಥಳಕ್ಕೆ ಹೆಚ್ಚಿನ ಪ್ರಾಧಾನ್ಯ ಲಭಿಸಿತು. ನಿಸರ್ಗ ರಮಣಿಯತೆಗೆ ಪ್ರಸಿದ್ಧವಾದ ಈ ಸ್ಥಳ ಉತ್ತರ ಭಾರತದ ಅತ್ಯಂತ ಪ್ರಸಿದ್ಧ ಗಿರಿಧಾಮಗಳಲ್ಲೊಂದೆನಿಸಿದೆ. ಲಾಲ್‍ತಿಬಾ, ಗನ್‍ಹಿಲ್, ಬೆನಾಂಗ್ ಹಿಲ್, ಕೆಂಪ್ಟಿಫಾಲ್ಸ್, ಮಾಸಿಫಾಲ್ಸ್, ಭಾಟಾಫಾಲ್ಸ್, ಹಿಯರ್ಸ್‍ಫಾಲ್ಸ್ ಲಂಡೂರ್, ಕುರ್ಲ ಇತ್ಯಾದಿ ಹತ್ತಾರು ಪ್ರೇಕ್ಷಣೀಯ ವಿಶ್ರಾಂತಿ ಮತ್ತು ಮನೋರಂಜನೆಯ ತಾಣಗಳು ಇಲ್ಲಿವೆ. 

	1841 ಹಾಗೂ 1883ರಲ್ಲಿ ಅಫ್‍ಘಾನಿಸ್ತಾನದ ಅಮೀರರಾದ ದೋಸ್ತೆ ಅಹಮದ್ ಹಾಗೂ ಯಾಕೂಬ್‍ಖಾನರನ್ನು ಮತ್ತು 1853ರಲ್ಲಿ ಮಹಾರಾಜ ರಣಜಿತ್‍ಸಿಂಹನ ಮಗನಾದ ದಿಲಿಪ್‍ಸಿಂಹನನ್ನು ಇಲ್ಲಿ ಸೆರೆಯಲ್ಲಿಡಲಾಗಿತ್ತು. 

	1903ರಲ್ಲಿ ಖಾಸಗಿ ಸಂಸ್ಥೆಯೊಂದು ಮಸೂರಿಯಲ್ಲಿ ಉತ್ತರಪ್ರದೇಶದ ಪ್ರಪ್ರಥಮ ವಿದ್ಯುದಾಗಾರವನ್ನು ಪ್ರಾರಂಭಿಸಿತು. ದೆಹಲಿ ಮತ್ತು ಸುತ್ತಲ ಪ್ರದೇಶದವರಿಗೂ ಇತರರಿಗೂ ಮಸೂರಿ ಬೇಸಿಗೆಯ ವಿಶ್ರಾಂತಿಧಾಮ. ಇಲ್ಲಿ ಅನೇಕ ವಸತಿ ಶಾಲೆಗಳಿವೆ.    
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ